*ಆರ್ಡಿಸಿಸಿ ಬ್ಯಾಂಕ್ ನೇಮಕಾತಿಯಲ್ಲಿ ಭಾರೀ ಅಕ್ರಮ ಆರೋಪ…
*ಪಾರದರ್ಶಕತೆ ಇಲ್ಲದೆ ಫಲಿತಾಂಶ ಪ್ರಕಟಣೆ – ಮರುಪರೀಕ್ಷೆಗೆ ಆಗ್ರಹ..

*ಆರ್ಡಿಸಿಸಿ ಬ್ಯಾಂಕ್ ನೇಮಕಾತಿಯಲ್ಲಿ ಭಾರೀ ಅಕ್ರಮ ಆರೋಪ…
*ಪಾರದರ್ಶಕತೆ ಇಲ್ಲದೆ ಫಲಿತಾಂಶ ಪ್ರಕಟಣೆ – ಮರುಪರೀಕ್ಷೆಗೆ ಆಗ್ರಹ..
ಕೊಪ್ಪಳ/ರಾಯಚೂರು, ಮಾ.30:
ರಾಯಚೂರು ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ (ಆರ್ಡಿಸಿಸಿ) ನಲ್ಲಿ ನಡೆದ ವಿವಿಧ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯಲ್ಲಿ ಭಾರೀ ಅಕ್ರಮ ಹಾಗೂ ಗೋಲ್ಮಾಲ್ ನಡೆದಿರುವ ಆರೋಪಗಳು ಕೇಳಿಬಂದಿವೆ.
ಬ್ಯಾಂಕಿನಲ್ಲಿ ಖಾಲಿ ಇದ್ದ ವಿವಿಧ ವೃಂದದ ಹುದ್ದೆಗಳಿಗೆ 21-11-2025 ರಂದು ನೇಮಕಾತಿ ಪ್ರಕಟಣೆ ಹೊರಡಿಸಿ, ಆನ್ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿ, ನಂತರ ಲಿಖಿತ ಪರೀಕ್ಷೆ ನಡೆಸಲಾಗಿದೆ. ಆದರೆ ಪರೀಕ್ಷೆಯ ನಂತರ ಅಭ್ಯರ್ಥಿಗಳಿಗೆ ಪ್ರಶ್ನೆ ಪತ್ರಿಕೆ ನೀಡದಿರುವುದು ಹಾಗೂ ಕೀ-ಆನ್ಸರ್ ಬಿಡುಗಡೆ ಬಳಿಕ ಲೆಕ್ಕ ಹಾಕಿದ ಅಂಕಗಳು ಮತ್ತು ಅಂತಿಮ ಫಲಿತಾಂಶದಲ್ಲಿ ಪ್ರಕಟವಾದ ಅಂಕಗಳು ಹೊಂದಿಕೆಯಾಗದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.ಅಲ್ಲದೆ, ಪರೀಕ್ಷೆ ಬರೆದ ಎಲ್ಲಾ ಅಭ್ಯರ್ಥಿಗಳ ಸಂಪೂರ್ಣ ಅಂಕಪಟ್ಟಿ (ಮಾರ್ಕ್ಸ್ ಲಿಸ್ಟ್) ಪ್ರಕಟಿಸದೇ, ಯಾರು ಎಷ್ಟು ಅಂಕ ಪಡೆದಿದ್ದಾರೆ ಎಂಬ ಮಾಹಿತಿ ಬಹಿರಂಗಪಡಿಸದಿರುವುದು ನೇಮಕಾತಿ ಪಾರದರ್ಶಕತೆಗೆ ಧಕ್ಕೆ ತಂದಿದೆ.ಕರ್ನಾಟಕ ಸಹಕಾರ ಸಂಘಗಳ ನಿಯಮ 1960ರ ನಿಯಮ 18ರ ಪ್ರಕಾರ, ಲಿಖಿತ ಪರೀಕ್ಷೆಯ ಅಂಕಗಳನ್ನು ಅಭ್ಯರ್ಥಿಗಳಿಗೆ ನೀಡಬೇಕಾಗಿದ್ದರೂ, ಅದು ಪಾಲನೆಯಾಗಿಲ್ಲ ಎನ್ನಲಾಗಿದೆ.
ಇನ್ನೂ, 1:5 ಅನುಪಾತದಲ್ಲಿ ತಾತ್ಕಾಲಿಕ ಕಡಿತ ಅಂಕಗಳನ್ನು (Provisional Cut-off) ಪ್ರಕಟಿಸಿರುವುದರಲ್ಲಿ ಕೂಡ ಅಕ್ರಮ ಕಂಡುಬಂದಿದ್ದು, ಆಯ್ಕೆ ಪ್ರಕ್ರಿಯೆ ಸರಿಯಾಗಿ ಅನುಸರಿಸಲಿಲ್ಲ ಎಂಬ ಆರೋಪ ಕೇಳಿಬಂದಿದೆ. ಮೌಲ್ಯಮಾಪನ ವಿಧಾನ ಸ್ಪಷ್ಟವಾಗದೇ, ಫಲಿತಾಂಶ ಪ್ರಕಟಣೆ ಅಪೂರ್ಣವಾಗಿದೆ ಎಂದು ದೂರಲಾಗಿದೆ.ಈ ಹಿನ್ನೆಲೆಯಲ್ಲಿ ನೇಮಕಾತಿ ಪ್ರಕ್ರಿಯೆಯ ಸಮಗ್ರ ತನಿಖೆ ನಡೆಸಿ, ದಾಖಲೆಗಳನ್ನು ಪರಿಶೀಲಿಸಿ ಮರುಮೌಲ್ಯಮಾಪನ ನಡೆಸಬೇಕು. ಇಲ್ಲದಿದ್ದರೆ ಸಂಪೂರ್ಣ ನೇಮಕಾತಿಯನ್ನು ರದ್ದುಪಡಿಸಿ ಮರುಪರೀಕ್ಷೆ ನಡೆಸಬೇಕು ಎಂದು ಸಾಮಾಜಿಕ ಕಾರ್ಯಕರ್ತ ಹಾಗೂ ಪತ್ರಕರ್ತ ಎಸ್.ಎಂ. ಹಿರೇಮಠ ಆಗ್ರಹಿಸಿದ್ದಾರೆ.
ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆ ಉಲ್ಲಂಘನೆ ಆರೋಪ :
ಕೇಂದ್ರ ಸರ್ಕಾರದ ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆ ತಿದ್ದುಪಡಿ (ಆಗಸ್ಟ್ 2025) ಪ್ರಕಾರ, ಸಹಕಾರಿ ಬ್ಯಾಂಕುಗಳಲ್ಲಿ ನಿರ್ದೇಶಕರ ಗರಿಷ್ಠ ಅವಧಿ 10 ವರ್ಷಗಳಿಗೆ ಮಿತಿಗೊಳಿಸಲಾಗಿದೆ. ಈ ನಿಯಮ 1 ಆಗಸ್ಟ್ 2025ರಿಂದ ಜಾರಿಯಲ್ಲಿದ್ದರೂ, ಆರ್ಡಿಸಿಸಿ ಬ್ಯಾಂಕ್ನಲ್ಲಿ ಅದನ್ನು ಉಲ್ಲಂಘಿಸಿ ನೇಮಕಾತಿ ಪ್ರಕ್ರಿಯೆ ನಡೆಸಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.ರಾಜ್ಯದ ಎಲ್ಲಾ ಸಹಕಾರಿ ಬ್ಯಾಂಕುಗಳಿಗೆ ಈ ಸಂಬಂಧ ಸುತ್ತೋಲೆ ಜಾರಿಯಾಗಿದ್ದರೂ, ಅದನ್ನು ಲೆಕ್ಕಿಸದೆ ನವೆಂಬರ್ನಲ್ಲಿ ಮ್ಯಾನೇಜರ್, ಅಸಿಸ್ಟೆಂಟ್ ಮ್ಯಾನೇಜರ್ ಹಾಗೂ ಅಟೆಂಡರ್ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ನಡೆಸಿರುವುದು ಪ್ರಶ್ನಾರ್ಹವಾಗಿದೆ.
*ಅನರ್ಹ ನಿರ್ದೇಶಕರಿಂದ ಆಡಳಿತ?
ಬ್ಯಾಂಕ್ ಅಧ್ಯಕ್ಷ ವಿಶ್ವನಾಥ್ ಪಾಟೀಲ್ ತೋರಣದಿನ್ನಿ ಸೇರಿದಂತೆ ಕೆಲವು ನಿರ್ದೇಶಕರು 10 ವರ್ಷಕ್ಕಿಂತ ಹೆಚ್ಚು ಅವಧಿಗೆ ಕಾರ್ಯನಿರ್ವಹಿಸಿರುವುದಾಗಿ ಆರೋಪಿಸಲಾಗಿದೆ. ನಿಯಮ ಪ್ರಕಾರ ಅನರ್ಹರಾಗಬೇಕಿದ್ದರೂ, ಅವರು ಆಡಳಿತ ಮುಂದುವರೆಸಿ ನೇಮಕಾತಿ ನಡೆಸಿರುವುದು ಕಾನೂನು ಉಲ್ಲಂಘನೆ ಎನ್ನಲಾಗುತ್ತಿದೆ.ಇದರಿಂದ ನೇಮಕಾತಿಯ ವಿಶ್ವಾಸಾರ್ಹತೆ ಮೇಲೆಯೂ ಗಂಭೀರ ಅನುಮಾನಗಳು ಮೂಡಿವೆ ಹಾಗಾಗಿ ನೇಮಕಾತಿಯನ್ನು ತಕ್ಷಣ ಸ್ಥಗಿತಗೊಳಿಸಬೇಕು ಇಲ್ಲವಾದರೆ ನ್ಯಾಯಾಲಯದ ಮೊರೆ ಹೋಗುವುದಾಗಿ ಎಸ್. ಎಂ. ಹಿರೇಮಠ ಎಚ್ಚರಿಕೆ ನೀಡಿದ್ದಾರೆ.




