ಕೊಪ್ಪಳ: ಕಾಂಗ್ರೆಸ್ಸಿನ ಸುಳ್ಳು ಸುದ್ದಿಗೆ ಸಾರ್ವಜನಿಕರು ಕಿವಿಗೊಡಬಾರದು – ಲಕ್ಷ್ಮಣ ಕಾಳಿ…

ಕೊಪ್ಪಳ: ಕಾಂಗ್ರೆಸ್ಸಿನ ಸುಳ್ಳು ಸುದ್ದಿಗೆ ಸಾರ್ವಜನಿಕರು ಕಿವಿಗೊಡಬಾರದು – ಲಕ್ಷ್ಮಣ ಕಾಳಿ…
ಕೊಪ್ಪಳ: ಗ್ಯಾಸ್ ಸಿಲಿಂಡರ್ ಬೆಲೆ ವಿಚಾರದಲ್ಲಿ ಕಾಂಗ್ರೆಸ್ ಪಕ್ಷದ ನಾಯಕರು ಸುಳ್ಳು ಮಾಹಿತಿಯನ್ನು ಹಬ್ಬಿಸುತ್ತಿದ್ದು, ಸಾರ್ವಜನಿಕರು ಅದಕ್ಕೆ ಕಿವಿಗೊಡಬಾರದು ಎಂದು ಬಿಜೆಪಿ ಎಸ್‌ಸಿ ಮೋರ್ಚಾ ತಾಲೂಕು ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ ಕಾಳಿ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದ ಅವರು, 2014ರಲ್ಲಿ ಮನಮೋಹನ್ ಸಿಂಗ್ ಅವರು ಪ್ರಧಾನ ಮಂತ್ರಿಯಾಗಿದ್ದ ವೇಳೆ ಗ್ಯಾಸ್ ಸಿಲಿಂಡರ್ ಬೆಲೆ ಸುಮಾರು 1241 ರೂ. ಇತ್ತು. ಬಿಜೆಪಿ ಅಧಿಕಾರಕ್ಕೆ ಬಂದ ನಂತರ 2021ರಲ್ಲಿ ಸಿಲಿಂಡರ್ ಬೆಲೆಯನ್ನು ಸುಮಾರು 805 ರೂ.ವರೆಗೆ ಇಳಿಸಲಾಯಿತು. 2025ರಲ್ಲಿ ಅದು ಸುಮಾರು 853 ರೂ. ಇತ್ತು. ಇತ್ತೀಚೆಗೆ ಕೊಲ್ಲಿ ರಾಷ್ಟ್ರಗಳಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮವಾಗಿ ಕೇಂದ್ರ ಸರ್ಕಾರ ಪ್ರತಿ ಸಿಲಿಂಡರ್‌ಗೆ ಸುಮಾರು 60 ರೂ. ಹೆಚ್ಚಳ ಮಾಡಬೇಕಾದ ಪರಿಸ್ಥಿತಿ ಉಂಟಾಗಿದೆ ಎಂದು ತಿಳಿಸಿದ್ದಾರೆ.
ಆದರೂ ಕಾಂಗ್ರೆಸ್ ಸರ್ಕಾರದ ಕಾಲಕ್ಕೆ ಹೋಲಿಸಿದರೆ ಈಗಲೂ ಸುಮಾರು 328 ರೂ. ಕಡಿಮೆ ದರದಲ್ಲಿ ಸಿಲಿಂಡರ್ ನೀಡಲಾಗುತ್ತಿದೆ ಎಂದು ಅವರು ಹೇಳಿದ್ದಾರೆ. ಈ ವಿಷಯವನ್ನು ಮರೆಮಾಚಿ ಕಾಂಗ್ರೆಸ್ ನಾಯಕರು ಸುಳ್ಳು ಪ್ರಚಾರ ನಡೆಸುತ್ತಿರುವುದು ಸರಿಯಲ್ಲ ಎಂದು ಆರೋಪಿಸಿದರು.
ಕಾಂಗ್ರೆಸ್ ಆಡಳಿತದ ವೇಳೆ ಗ್ಯಾಸ್ ಬುಕ್ ಮಾಡಿದ ನಂತರ 15 ದಿನಗಳಾದರೂ ಸಿಲಿಂಡರ್ ಸಿಗದೆ, ಜನರು ಬೆಳಿಗ್ಗೆ 5 ಗಂಟೆಗೆ ಗ್ಯಾಸ್ ಏಜೆನ್ಸಿಗಳ ಮುಂದೆ ಸಾಲಿನಲ್ಲಿ ನಿಲ್ಲಬೇಕಾಗುತ್ತಿತ್ತು. ಆ ಸಮಯದಲ್ಲಿ ಕೇವಲ 6 ಸಿಲಿಂಡರ್ ಮಾತ್ರ ನೀಡಲಾಗುತ್ತಿತ್ತು. ಆದರೆ ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ನಂತರ ಒಂದೇ ಕರೆ ಮಾಡಿದರೆ ಅರ್ಧ ದಿನ ಅಥವಾ ಒಂದು ದಿನದೊಳಗೆ ಮನೆಯ ಬಾಗಿಲಿಗೆ ಸಿಲಿಂಡರ್ ತಲುಪುವ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.
ಗ್ರಾಮೀಣ ಪ್ರದೇಶಗಳಲ್ಲಿ ಕಟ್ಟಿಗೆ ಬಳಸಿ ಅಡುಗೆ ಮಾಡುತ್ತಿದ್ದ ಮಹಿಳೆಯರ ಸಂಕಷ್ಟವನ್ನು ಗಮನಿಸಿ, ಉಜ್ವಲ ಯೋಜನೆಯಡಿ ಸುಮಾರು 15 ಕೋಟಿ ಉಚಿತ ಗ್ಯಾಸ್ ಸಂಪರ್ಕ ನೀಡಲಾಗಿದೆ. ಇದರ ಕೀರ್ತಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಲ್ಲುತ್ತದೆ ಎಂದು ಲಕ್ಷ್ಮಣ ಕಾಳಿ ಹೇಳಿದ್ದಾರೆ.
ಅಂತರಾಷ್ಟ್ರೀಯ ಯುದ್ಧ ಪರಿಸ್ಥಿತಿಯಿಂದ ಗ್ಯಾಸ್ ಸರಬರಾಜಿನಲ್ಲಿ ಸ್ವಲ್ಪ ವ್ಯತ್ಯಾಸ ಉಂಟಾದರೂ ಅದನ್ನು ರಾಜಕೀಯವಾಗಿ ಬಳಸಿಕೊಳ್ಳಲು ಕಾಂಗ್ರೆಸ್ ನಾಯಕರು ಪ್ರಯತ್ನಿಸುತ್ತಿದ್ದಾರೆ. ಇಂತಹ ಕಠಿಣ ಸಂದರ್ಭದಲ್ಲೂ ಸರ್ಕಾರದೊಂದಿಗೆ ಕೈಜೋಡಿಸುವ ಬದಲು ಸುಳ್ಳು ಪ್ರಚಾರ ಮಾಡುವುದು ಸರಿಯಲ್ಲ ಎಂದು ಅವರು ಟೀಕಿಸಿದರು.
ಪ್ರಧಾನಿ ನರೇಂದ್ರ ಮೋದಿ ದೇಶದ ಅಭಿವೃದ್ಧಿಗಾಗಿ ನಿರಂತರವಾಗಿ ಶ್ರಮಿಸುತ್ತಿದ್ದು, ವಿಶ್ವದ 26ಕ್ಕೂ ಹೆಚ್ಚು ದೇಶಗಳಿಂದ ಅತ್ಯುನ್ನತ ಗೌರವ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಜೊತೆಗೆ ಸುಮಾರು 19 ದೇಶಗಳ ಸಂಸತ್ತಿನಲ್ಲಿ ಭಾಷಣ ಮಾಡಿದ ಗೌರವವೂ ಅವರಿಗೆ ಸಲ್ಲುತ್ತದೆ. ಇಂತಹ ನಾಯಕರ ಬಗ್ಗೆ ಸುಳ್ಳು ಅಪಪ್ರಚಾರ ಮಾಡುವುದನ್ನು ಕಾಂಗ್ರೆಸ್ ನಾಯಕರು ಇನ್ನಾದರೂ ನಿಲ್ಲಿಸಬೇಕು ಎಂದು ಬಿಜೆಪಿ ಎಸ್‌ಸಿ ಮೋರ್ಚಾ ತಾಲೂಕು ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ ಕಾಳಿ ಆಗ್ರಹಿಸಿದ್ದಾರೆ.





