ಸರೋಜಮ್ಮ ಬಡಾವಣೆ ಅಭಿವೃದ್ಧಿಗೆ ಕಾದು ಕೂತ ಫಲಾನುಭವಿಗಳು: ಬಡಾವಣೆ “ದಾರಿ ಯಾವುದಯ್ಯ?”
ನಗರಾಭಿವೃದ್ಧಿ ಪ್ರಾಧಿಕಾರ ನಿದ್ದೆಯಲ್ಲಿ ....

ಸರೋಜಮ್ಮ ಬಡಾವಣೆ ಅಭಿವೃದ್ಧಿಗೆ ಕಾದು ಕೂತ ಫಲಾನುಭವಿಗಳು: “ನಮಗೆ ದಾರಿ ಯಾವುದಯ್ಯ?”
ಕೊಪ್ಪಳ: 23 ವರ್ಷಗಳ ಬಳಿಕ ನಿವೇಶನ ಹಂಚಿಕೆಗೊಂಡ ಸರೋಜಮ್ಮ ಬಡಾವಣೆಯಲ್ಲಿ ಈಗ ಅಭಿವೃದ್ಧಿ ಕಾರ್ಯಗಳ ಕೊರತೆ ಫಲಾನುಭವಿಗಳ ಆತಂಕಕ್ಕೆ ಕಾರಣವಾಗಿದೆ. ಮನೆ ಕಟ್ಟುವ ಕನಸಿನಿಂದ ಕಾಯುತ್ತಿದ್ದವರು ನಿವೇಶನ ಪಡೆದಿದ್ದರೂ, ಮೂಲಭೂತ ಸೌಕರ್ಯಗಳಿಲ್ಲದೇ ಸಂಕಷ್ಟ ಅನುಭವಿಸುತ್ತಿದ್ದಾರೆ.
ಲೇಔಟ್ ನಿರ್ಮಾಣವಾದ ಬಳಿಕ ಅಲ್ಲಿನ ಪಾರ್ಕ್ ಅಭಿವೃದ್ಧಿ ಸೇರಿದಂತೆ ಮೂಲ ಸೌಕರ್ಯಗಳನ್ನು ಕಲ್ಪಿಸಬೇಕಿದ್ದ ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರ ಕಣ್ಮುಚ್ಚಿ ಕುಳಿತಿದೆ ಎಂಬ ಆರೋಪ ಕೇಳಿಬರುತ್ತಿದೆ. ಪ್ರಾಧಿಕಾರದ ಸ್ವಾಮ್ಯದ ಸೈಟ್‌ಗಳಲ್ಲಿ ಮುಳ್ಳುಗಿಡಗಳು ಬೆಳೆದು ನಿಂತಿದ್ದು, ನಿರ್ಲಕ್ಷ್ಯದ ಚಿತ್ರಣ ಸ್ಪಷ್ಟವಾಗಿ ಗೋಚರಿಸುತ್ತಿದೆ.
ನಕ್ಷೆಯಲ್ಲಿ ಸರೋಜಮ್ಮ ಬಡಾವಣೆಗೆ ಕಿಮ್ಸ್ (KIMS) ಪಕ್ಕದಿಂದ ಮುಖ್ಯ ರಸ್ತೆ ಸಂಪರ್ಕ ತೋರಿಸಲಾಗಿದ್ದರೂ, ವಾಸ್ತವದಲ್ಲಿ ಇನ್ನೂ ಅಧಿಕೃತ ರಸ್ತೆ ನಿರ್ಮಾಣವಾಗಿಲ್ಲ. ಹೀಗಾಗಿ “ಸರೋಜಮ್ಮ ಬಡಾವಣೆಗೆ ದಾರಿ ಯಾವುದಯ್ಯ?” ಎಂಬ ಪ್ರಶ್ನೆ ಪ್ಲಾಟ್ ಪಡೆದ ಫಲಾನುಭವಿಗಳಲ್ಲಿ ಮೂಡಿದೆ. ಸಮರ್ಪಕ ರಸ್ತೆ ಇಲ್ಲದೆ ಮನೆ ನಿರ್ಮಾಣ ಕಾರ್ಯವೂ ಆರಂಭಿಸಲು ಸಾಧ್ಯವಾಗದ ಸ್ಥಿತಿ ಉಂಟಾಗಿದೆ.
ಒಟ್ಟಾರೆಯಾಗಿ ನಿವೇಶನ ಹಂಚಿಕೆಯಾದರೂ, ಮೂಲಸೌಕರ್ಯಗಳ ಕೊರತೆ ಬಡಾವಣೆಯ ಅಭಿವೃದ್ಧಿಗೆ ಅಡ್ಡಿಯಾಗುತ್ತಿದೆ. ಇದೀಗ ಪ್ರಾಧಿಕಾರದ ಹೊಸ ಅಧ್ಯಕ್ಷರು ಹಾಗೂ ಆಯುಕ್ತರು ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿ ರಸ್ತೆ, ಪಾರ್ಕ್ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸುತ್ತಾರೆಯೇ ಎಂಬುದನ್ನು ಕಾದು ನೋಡಬೇಕಾಗಿದೆ.




