
ಸಾಣಾಪುರ ಗ್ಯಾಂಗ್ ರೇಪ್ ಹಾಗೂ ಹತ್ಯೆ ಪ್ರಕರಣ: ಮೂವರಿಗೆ ಮರಣದಂಡನೆ ಶಿಕ್ಷೆ..
ಗಂಗಾವತಿ: ತಾಲೂಕಿನ ಸಾಣಾಪುರ ಗ್ರಾಮದಲ್ಲಿ ಕಳೆದ ವರ್ಷ ನಡೆದ ವಿದೇಶಿ ಮಹಿಳೆ ಹಾಗೂ ಸ್ಥಳೀಯ ಹೋಂ ಸ್ಟೆ ಒಡತಿ ಮೇಲಿನ ಅತ್ಯಾಚಾರ ಮತ್ತು ಒಡಿಶಾ ಮೂಲದ ಪ್ರವಾಸಿಗನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗಂಗಾವತಿ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸಷೆನ್ಸ್ ನ್ಯಾಯಾಲಯ ಮಹತ್ವದ ತೀರ್ಪು ಪ್ರಕಟಿಸಿದೆ. ಪ್ರಕರಣದಲ್ಲಿ ತಪ್ಪಿತಸ್ಥರೆಂದು ಸಾಬೀತಾದ ಮೂವರು ಆರೋಪಿಗಳಿಗೆ ಮರಣದಂಡನೆ ಶಿಕ್ಷೆ ವಿಧಿಸಲಾಗಿದೆ.
ಶಿಕ್ಷೆಗೊಳಗಾದವರನ್ನು ಗಂಗಾವತಿಯ ಸಾಯಿನಗರದ *ಮಲ್ಲೇಶ್ (ಹಂದಿಮಲ್ಲ), *ಸಾಯಿ (ಚೈತನ್ಯಸಾಯಿ) ಮತ್ತು* ಶರಣಪ್ಪ (ಶರಣು ಬಸವರಾಜ್) ಎಂದು ಗುರುತಿಸಲಾಗಿದೆ.
ಪ್ರಕರಣದ ಹಿನ್ನೆಲೆ:
ಕಳೆದ ವರ್ಷದ ಮಾರ್ಚ್ ತಿಂಗಳಲ್ಲಿ ಇಸ್ರೇಲ್ ಮೂಲದ ಮಹಿಳೆ ಪ್ರವಾಸದ ನಿಮಿತ್ತ ಸಾಣಾಪುರ ಗ್ರಾಮಕ್ಕೆ ಆಗಮಿಸಿದ್ದರು. ಅವರೊಂದಿಗೆ ಒಡಿಶಾ ರಾಜ್ಯದ ಬಿಬಾಶ್ ಎಂಬ ಪ್ರವಾಸಿಗನೂ ಇದ್ದನು. ಜೊತೆಗೆ ಅಮೆರಿಕಾ ಹಾಗೂ ಮಹಾರಾಷ್ಟ್ರ ಮೂಲದ ಇನ್ನೂ ಕೆಲ ಪ್ರವಾಸಿಗರು ತಂಡದಲ್ಲಿದ್ದರು.
ಈ ತಂಡವನ್ನು ಸ್ಥಳೀಯ ಹೋಂ ಸ್ಟೆ ಒಡತಿ ಕಾಲುವೆ ಪಕ್ಕದ ಬೆಳದಿಂಗಳ ಸೌಂದರ್ಯ ವೀಕ್ಷಣೆಗೆ ಮಧ್ಯರಾತ್ರಿ ಕರೆದುಕೊಂಡು ಹೋಗಿದ್ದ ವೇಳೆ, ಪಾನಮತ್ತರಾಗಿ ಬಂದ ಆರೋಪಿಗಳು ವಿದೇಶಿ ಮಹಿಳೆ ಹಾಗೂ ಹೋಂ ಸ್ಟೆ ಒಡತಿ ಮೇಲೆ ಅತ್ಯಾಚಾರ ನಡೆಸಿದರು. ಈ ವೇಳೆ ಒಡಿಶಾ ಮೂಲದ ಪ್ರವಾಸಿಗ ಬಿಬಾಶ್ ಅವರನ್ನು ಹತ್ಯೆ ಮಾಡಲಾಗಿದೆ.
ಬಂಧನ ಮತ್ತು ವಿಚಾರಣೆ .. ಶಿಕ್ಷೆ…..
ಘಟನೆ ನಡೆದ ಕೆಲವೇ ದಿನಗಳಲ್ಲಿ ಪೊಲೀಸರು ಆರೋಪಿಗಳನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದರು. ಪ್ರಕರಣದ ವಿಚಾರಣೆ ಪೂರ್ಣಗೊಂಡ ಬಳಿಕ ನ್ಯಾಯಾಲಯವು ಆರೋಪಿಗಳು ತಪ್ಪಿತಸ್ಥರೆಂದು ನಿರ್ಧರಿಸಿ ಕಠಿಣ ಶಿಕ್ಷೆ ವಿಧಿಸಿದೆ.ಈ ತೀರ್ಪು ಸಮಾಜಕ್ಕೆ ಗಂಭೀರ ಅಪರಾಧಗಳ ವಿರುದ್ಧ ಕಾನೂನು ಕಟ್ಟುನಿಟ್ಟಿನ ಸಂದೇಶ ನೀಡುವಂತಾಗಿದೆ.




