ಏಪ್ರಿಲ್ 10 – ರಾಷ್ಟ್ರೀಯ ಒಡಹುಟ್ಟಿದವರ ದಿನ
(ಮನದಾಳ ಮುಟ್ಟುವ ಒಡಹುಟ್ಟಿದವರ ಬಂಧದ ಕಥೆ)
ಈ ಜಗತ್ತಿನಲ್ಲಿ ನಾವು ಹುಟ್ಟುವಾಗ ನಮ್ಮೊಂದಿಗೆ ಮಾತಾಡದೇ, ಕೇಳದೇ, ಕೇಳಿಸಿಕೊಂಡೇ ನಮ್ಮ ಬದುಕಿನ ಭಾಗವಾಗುವವರು—ಅವರು ನಮ್ಮ ಒಡಹುಟ್ಟಿದವರು.ಒಂದೇ ತಾಯಿ ಹೃದಯದ ತಂಪಿನಲ್ಲಿ ಬೆಳೆದ, ಒಂದೇ ತಂದೆಯ ನೆರಳಿನಲ್ಲಿ ಬೆಳೆದ ಈ ಬಂಧವು, ಜೀವನದ ಅತ್ಯಂತ ನಿಸ್ವಾರ್ಥ ಸಂಬಂಧಗಳಲ್ಲಿ ಒಂದಾಗಿದೆ.“ಹುಟ್ಟುತ್ತ ಅಣ್ಣತಮ್ಮ, ಬೆಳೆಯುತ್ತ ದಯಾದಿಗಳು” ಎಂಬ ಮಾತು ಕೇವಲ ಒಂದು ನುಡಿಗಟ್ಟು ಅಲ್ಲ—ಅದು ಬದುಕಿನ ನಿಜವಾದ ಅನುಭವ. ಬಾಲ್ಯದಲ್ಲಿ ಸಣ್ಣ ವಿಷಯಕ್ಕೂ ಜಗಳವಾಡುತ್ತಿದ್ದ ಅಣ್ಣ-ತಮ್ಮ, ಅಕ್ಕ-ತಂಗಿಯರು… ಅದೇ ಮಕ್ಕಳು ದೊಡ್ಡವರಾದಾಗ, ಜೀವನದ ಹೊರೆ ಹೊತ್ತಾಗ, ಒಬ್ಬರ ನೋವನ್ನು ಮತ್ತೊಬ್ಬರು ತಮ್ಮದಾಗಿಸಿಕೊಂಡು, ಕಣ್ಣೀರನ್ನು ಮೌನವಾಗಿ ಒರೆಸುವ ದಯಾದಿಗಳಾಗಿ ರೂಪಾಂತರಗೊಳ್ಳುತ್ತಾರೆ.
ಬಾಲ್ಯದ ದಿನಗಳನ್ನು ನೆನಪಿಸಿಕೊಳ್ಳಿ…
ಒಟ್ಟಿಗೆ ಆಡಿದ ಆಟಗಳು, ಹಂಚಿಕೊಂಡ ಚಾಕಲೇಟ್, ಅಮ್ಮನ ಬಳಿ ಒಬ್ಬರಿಗಾಗಿ ಮತ್ತೊಬ್ಬರು ಹೊಣೆ ಹೊತ್ತ ಕ್ಷಣಗಳು, ಸಣ್ಣಸಣ್ಣ ಜಗಳಗಳ ನಂತರವೂ ಮತ್ತೆ ಮಾತು ಶುರು ಮಾಡಿದ ಕ್ಷಣಗಳು ಇವೆಲ್ಲವೂ ಕೇವಲ ನೆನಪುಗಳಲ್ಲ, ಅವು ನಮ್ಮ ಹೃದಯದಲ್ಲಿ ಸದಾ ಜೀವಂತವಾಗಿರುವ ಭಾವನೆಗಳು.ಒಡಹುಟ್ಟಿದವರು ಎಂದರೆ, ನಾವು ಹೇಳದೆ ನಮ್ಮ ಮನಸ್ಸನ್ನು ಅರ್ಥಮಾಡಿಕೊಳ್ಳುವವರು.ನಮ್ಮ ಕಣ್ಣೀರಿನ ಹಿಂದಿರುವ ನೋವನ್ನು ಮಾತಿಲ್ಲದೆ ತಿಳಿಯುವವರು.ನಮ್ಮ ಯಶಸ್ಸಿನಲ್ಲಿ ನಮ್ಮಿಗಿಂತ ಹೆಚ್ಚು ಸಂತೋಷಪಡುವವರು.ನಮ್ಮ ವಿಫಲತೆಯಲ್ಲಿ ನಮ್ಮಿಗಿಂತ ಹೆಚ್ಚು ನೋವು ಅನುಭವಿಸುವವರು.
ಅಣ್ಣನ ಕಾವಲಿನಲ್ಲಿ ಒಂದು ಸುರಕ್ಷತೆ ಇರುತ್ತದೆ,ಅಕ್ಕನ ಮಡಿಲಿನಲ್ಲಿ ಒಂದು ತಾಯಿಯ ಸಾಂತ್ವನ ಇರುತ್ತದೆ…ತಮ್ಮನ ನಂಬಿಕೆಯಲ್ಲಿ ಒಂದು ನಿಷ್ಕಪಟತೆ ಇರುತ್ತದೆ…ತಂಗಿಯ ಪ್ರೀತಿಯಲ್ಲಿ ಒಂದು ಮಧುರತೆ ಇರುತ್ತದೆ…ಇಂದಿನ ಜೀವನದ ಓಟದಲ್ಲಿ, ದೂರಗಳು ಹೆಚ್ಚಾಗಬಹುದು… ಮಾತುಕತೆ ಕಡಿಮೆಯಾಗಬಹುದು… ಆದರೆ ಹೃದಯದ ತಂತಿಗಳು ಎಂದಿಗೂ ಕಳಚುವುದಿಲ್ಲ. ಎಷ್ಟು ದೂರ ಇದ್ದರೂ, ಒಂದು ಕ್ಷಣದಲ್ಲಿ ನೆನೆಸಿಕೊಂಡರೆ ಸಾಕು—ಅವರ ಪ್ರೀತಿ ನಮ್ಮ ಹತ್ತಿರವೇ ಇರುತ್ತದೆ.
ಈ ರಾಷ್ಟ್ರೀಯ ಒಡಹುಟ್ಟಿದವರ ದಿನದಂದು, ನಾವು ಒಂದು ಕ್ಷಣ ನಿಲ್ಲೋಣ…ಬಾಲ್ಯದ ಆ ದಿನಗಳನ್ನು ನೆನೆದು, ಒಂದು ಕರೆ ಮಾಡೋಣ…ಒಂದು “ಹೇಗಿದ್ದೀಯ?” ಎಂದು ಕೇಳೋಣ…ಅದರ ಹಿಂದೆ ಇರುವ ಪ್ರೀತಿ ಅವರಿಗೆ ತಲುಪುತ್ತದೆ.ಏಕೆಂದರೆ, ಈ ಜಗತ್ತಿನಲ್ಲಿ ಬದಲಾಗದ, ಬದಲಾಗಲಾರದ ಒಂದು ಸಂಬಂಧ ಇದ್ದರೆ ಅದು ಒಡಹುಟ್ಟಿದವರ ಸಂಬಂಧ.ಅದು ನಮ್ಮ ಜೀವದ ಜೊತೆ ಬೆಸೆದುಕೊಂಡಿರುವ ಒಂದು ಭಾವನೆ…ಅದು ನಮ್ಮ ಹೃದಯದ ಶಾಶ್ವತ ಸ್ಪಂದನೆ.
💐 ಒಡಹುಟ್ಟಿದವರನ್ನು ಪ್ರೀತಿಸಿ… ಅವರ ಜೊತೆಗಿನ ನೆನಪುಗಳನ್ನು ಜೀವಂತವಾಗಿರಿಸಿ… ಏಕೆಂದರೆ ಅವರು ನಮ್ಮ ಬದುಕಿನ ಅಮೂಲ್ಯ ಧನ. 💐
ಲೇಖನ :ಆಂಜನೇಯ ಮಟ್ಟೂರ ಶಿಕ್ಷಕರು. ಗಂಗಾವತಿ.



