ವಾದ್ಯ ನಿನಾದದೊಂದಿಗೆ ಆರಂಭವಾದ ಅಭಿನವ ಸಂಗೀತ ನೃತ್ಯೋತ್ಸವ – ಕಲಾರಸಿಕರ ಮನಗೆದ್ದ ವೈಭವಮಯ ಸಂಭ್ರಮ

ವಾದ್ಯ ನಿನಾದದೊಂದಿಗೆ ಆರಂಭವಾದ ಅಭಿನವ ಸಂಗೀತ ನೃತ್ಯೋತ್ಸವ – ಕಲಾರಸಿಕರ ಮನಗೆದ್ದ ವೈಭವಮಯ ಸಂಭ್ರಮ
ಕೊಪ್ಪಳ : ನಗರದ ಸಾಂಸ್ಕೃತಿಕ ವಾತಾವರಣಕ್ಕೆ ಮತ್ತಷ್ಟು ಮೆರುಗು ತಂದಂತೆ, ಶ್ರೀ ಅಭಿನವ ಸಂಗೀತ ಕಲಾ ಹಾಗೂ ಸಾಂಸ್ಕೃತಿಕ ಶಿಕ್ಷಣ ಸಂಸ್ಥೆ ವತಿಯಿಂದ ಆಯೋಜಿಸಲಾದ ಅಭಿನವ ಸಂಗೀತ ನೃತ್ಯೋತ್ಸವ ಕಾರ್ಯಕ್ರಮವು ನಗರದ ಖಾಸಗಿ ಹೋಟೆಲ್ನಲ್ಲಿ ಅದ್ಧೂರಿಯಾಗಿ ನೆರವೇರಿತು.
ವಾದ್ಯಗಳ ಮಧುರ ನಿನಾದದೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದ್ದು, ಆರಂಭದಿಂದ ಅಂತ್ಯದವರೆಗೆ ಸಂಗೀತ ಮತ್ತು ನೃತ್ಯದ ರಸದೌತಣ ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸಿತು. ಸುಗಮ ಸಂಗೀತ, ಜಾನಪದ ಹಾಗೂ ಶಾಸ್ತ್ರೀಯ ಸಂಗೀತದೊಂದಿಗೆ ನೃತ್ಯ ಪ್ರದರ್ಶನಗಳು ಜರುಗಿ, ಕಲೆಗಳ ವೈವಿಧ್ಯತೆಯನ್ನು ಹೊಳಪುಗೊಳಿಸಿತು.
ಕಾರ್ಯಕ್ರಮವನ್ನು ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ಪ್ರಸನ್ನ ಗಡಾದ್ ಉದ್ಘಾಟಿಸಿ, ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳು ಯುವ ಪ್ರತಿಭೆಗಳ ಬೆಳೆವಿಕೆಗೆ ಮಹತ್ತರ ವೇದಿಕೆಯಾಗಿವೆ ಎಂದು ಅಭಿಪ್ರಾಯಪಟ್ಟರು. ಮುಖ್ಯ ಅತಿಥಿಗಳಾಗಿ ಅನಿಲ್ ಕುಮಾರ್ ಬೋರಟ್ಟಿ, ದಾದಾಪೀರ್ ಗೊನೆಗೊಂಡ್ಲ, ಗವಿಸಿದ್ದಪ್ಪ ಕರಡಿ, ಗಿರೀಶ್ ಹಿರೇಮಠ, ವೀರಪನಗೌಡ ಗಂಗನಾಳ, ಶರಣಪ್ಪ ಚೌಡಕಿ, ಶಿವನಗೌಡ ಹಲಗೇರಿ ಸೇರಿದಂತೆ ಹಲವರು ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಶೋಭೆ ತಂದರು.
ಖ್ಯಾತ ಕಲಾವಿದರಾದ ವಿಜಯಲಕ್ಷ್ಮಿ ಶಾವಿ, ಪೂರ್ಣಿಮಾ ತಾವರಗೇರಾ, ಸಂಗು ಹಿರೇಮಠ, ನಾಗರಾಜ ಶಾವಿ, ರಾಮಚಂದ್ರಪ್ಪ ಉಪ್ಪಾರ, ಮಾರುತಿ ಬಿನ್ನಾಳ, ಸಂಜನ ಬೆಲ್ಲದ ಅವರ ಮನಮೋಹಕ ಸಂಗೀತ ಪ್ರದರ್ಶನಗಳು ಪ್ರೇಕ್ಷಕರಿಂದ ಭಾರಿ ಕರತಾಡನ ಪಡೆದವು. ಅವರ ಗಾಯನ ಕಲೆ ಸಂಗೀತಾಸಕ್ತರಿಗೆ ಮರೆಯಲಾಗದ ಅನುಭವವನ್ನು ನೀಡಿತು.




