news

ಶಿವಾಜಿ ಜಯಂತಿ ಮೆರವಣಿಗೆ ವೇಳೆ ಕಲ್ಲು ತೂರಾಟ: ಎಸ್‌ಪಿ ಸೇರಿ ಮೂವರಿಗೆ ಗಾಯ, 8 ಆರೋಪಿಗಳ ಬಂಧನ

ಶಿವಾಜಿ ಜಯಂತಿ ಮೆರವಣಿಗೆ ವೇಳೆ ಕಲ್ಲು ತೂರಾಟ: ಎಸ್‌ಪಿ ಸೇರಿ ಮೂವರಿಗೆ ಗಾಯ, 8 ಆರೋಪಿಗಳ ಬಂಧನ

ಬಾಗಲಕೋಟೆ, ಫೆ.20:ನಗರದಲ್ಲಿ ನಡೆದ ಶಿವಾಜಿ ಜಯಂತಿ ಮೆರವಣಿಗೆ ವೇಳೆ ಕಲ್ಲು ತೂರಾಟ ಸಂಭವಿಸಿ ಬಾಗಲಕೋಟೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಸಿದ್ಧಾರ್ಥ್ ಗೋಯಲ್ ಸೇರಿದಂತೆ ಮೂವರಿಗೆ ಗಾಯಗಳಾಗಿವೆ. ಘಟನೆ ಬಳಿಕ ಉದ್ವಿಗ್ನ ಪರಿಸ್ಥಿತಿ ನಿರ್ಮಾಣಗೊಂಡ ಹಿನ್ನೆಲೆಯಲ್ಲಿ ನಗರದಲ್ಲಿನ ಪ್ರಮುಖ ಪ್ರದೇಶಗಳಲ್ಲಿ ಬಿಎನ್‌ಎಸ್ 163ರಡಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ಬಾಗಲಕೋಟೆ ಕಿಲ್ಲಾ ಓಣಿಯಲ್ಲಿ ಮೆರವಣಿಗೆ ಸಾಗುತ್ತಿದ್ದ ವೇಳೆ ಶಿವಾಜಿ ಭಾವಚಿತ್ರಕ್ಕೆ ಚಪ್ಪಲಿ ಎಸೆದಿರುವುದಾಗಿ ಆರೋಪಗಳಿದ್ದು, ಬಳಿಕ ಕೆಲವರು ಮೆರವಣಿಗೆ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಇದರಿಂದ ಸ್ಥಳದಲ್ಲಿ ಕೆಲಕಾಲ ಉದ್ರಿಕ್ತ ಪರಿಸ್ಥಿತಿ ನಿರ್ಮಾಣಗೊಂಡಿತು. ತಕ್ಷಣ ಮಧ್ಯಪ್ರವೇಶಿಸಿದ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಲು ಹರಸಾಹಸಪಟ್ಟರು.
ಉದ್ರಿಕ್ತ ಜನರನ್ನು ನಿಯಂತ್ರಿಸುವ ವೇಳೆ ಎಸ್‌ಪಿ ಸಿದ್ಧಾರ್ಥ್ ಗೋಯಲ್ ಅವರ ತಲೆಗೆ ಕಲ್ಲೇಟು ಬಿದ್ದು ಗಾಯವಾಗಿದೆ. ಇಬ್ಬರು ಕಾನ್ಸ್‌ಟೇಬಲ್‌ಗಳಿಗೂ ಗಾಯಗಳಾಗಿವೆ. ತಲೆಯಿಂದ ರಕ್ತಸ್ರಾವವಾಗಿದ್ದರೂ ಎಸ್‌ಪಿ ಸ್ಥಳದಲ್ಲೇ ಉಳಿದು ಕರ್ತವ್ಯ ನಿರ್ವಹಿಸಿದ್ದಾರೆ ಎಂದು ತಿಳಿದುಬಂದಿದೆ.

* 8 ಆರೋಪಿಗಳ ಬಂಧನ…

ಘಟನೆಗೆ ಸಂಬಂಧಿಸಿದಂತೆ ಸುಮೋಟೋ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. ನವನಗರ ನಿವಾಸಿ ತನ್ವೀರ್ ಎಂಬ ವ್ಯಕ್ತಿಯನ್ನು ಮೊದಲಿಗೆ ಬಂಧಿಸಲಾಗಿದ್ದು, ಸಿಸಿಟಿವಿ ದೃಶ್ಯಾವಳಿಗಳ ಪರಿಶೀಲನೆ ಆಧರಿಸಿ ಒಟ್ಟು 8 ಮಂದಿಯನ್ನು ಬಂಧಿಸಲಾಗಿದೆ ಎಂದು ಎಸ್‌ಪಿ ತಿಳಿಸಿದ್ದಾರೆ.“ಘಟನೆ ಪೂರ್ವ ಯೋಜಿತವಾಗಿಲ್ಲ. ಡಿಜೆ ವಿಚಾರಕ್ಕೂ ಸಂಬಂಧ ಇಲ್ಲ. ರಾತ್ರಿ 10 ಗಂಟೆ 6 ನಿಮಿಷಕ್ಕೆ ಕಲ್ಲು ತೂರಾಟ ನಡೆದಿದೆ. ಮಸೀದಿ ಒಳಗಿನ ಶೂ ರ್ಯಾಕ್‌ಗೆ ಬಳಸಿದ್ದ ಕಲ್ಲುಗಳನ್ನು ತೆಗೆದುಕೊಂಡು ತೂರಾಟ ಮಾಡಲಾಗಿದೆ. ಮಸೀದಿಯೊಳಗೆ ಯಾವುದೇ ರಾಡ್ ಅಥವಾ ಬೇರೆ ಅಸ್ತ್ರಗಳು ಇರಲಿಲ್ಲ,” ಎಂದು ಎಸ್‌ಪಿ ಸಿದ್ಧಾರ್ಥ್ ಗೋಯಲ್ ಸ್ಪಷ್ಟಪಡಿಸಿದ್ದಾರೆ.
🚔 ಕಟ್ಟು ನಿಟ್ಟಿನ ಭದ್ರತೆ
ಹಳೆ ಬಾಗಲಕೋಟೆ, ನವನಗರ ಹಾಗೂ ವಿದ್ಯಾಗಿರಿ ಪ್ರದೇಶಗಳಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಪಂಕಾ ಮಸೀದಿ ಮತ್ತು ಕೊತ್ತಲೇಶ್ವರ ದೇವಸ್ಥಾನದ ಸುತ್ತಮುತ್ತ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಹೆಚ್ಚುವರಿ ಪಡೆಗಳನ್ನು ನಿಯೋಜಿಸಿ ಗುಂಪುಗೂಡುವಿಕೆಯನ್ನು ನಿಯಂತ್ರಿಸಲಾಗಿದೆ.
ಕಲ್ಲು ತೂರಾಟದಲ್ಲಿ ಗಾಯಗೊಂಡ ಕೆಲವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯನ್ನು ಖಂಡಿಸಿ ಕೆಲವು ಸಂಘಟನೆಗಳು ಬಂದ್‌ಗೆ ಕರೆ ನೀಡಿರುವ ಹಿನ್ನೆಲೆ, ನಗರದಲ್ಲಿ ಮುಂಜಾಗ್ರತಾ ಕ್ರಮಗಳನ್ನು ಬಿಗಿಗೊಳಿಸಲಾಗಿದೆ.
ಪೊಲೀಸರು ಪ್ರಕರಣದ ಕುರಿತು ಮುಂದಿನ ತನಿಖೆ ಮುಂದುವರೆಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button