ಕೊಪ್ಪಳ ಸುದ್ದಿ

ಮಾಜಿ ದೇವದಾಸಿಯರಿಗೆ ಸರ್ಕಾರಿ ಸೌಲತ್ತು ಒದಗಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುವೆ: ಡಾ.ನಾಗಲಕ್ಷ್ಮೀ ಚೌಧರಿ

ಕೊಪ್ಪಳ ತಾಲೂಕ ಪಂಚಾಯತಿಯಲ್ಲಿ ಜರುಗಿದ ಮಾಜಿ ದೇವದಾಸಿಯರೊಂದಿಗೆ ಸಂವಾದ ಕಾರ್ಯಕ್ರಮ
—–
ಮಾಜಿ ದೇವದಾಸಿಯರಿಗೆ ಸರ್ಕಾರಿ ಸೌಲತ್ತು ಒದಗಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುವೆ: ಡಾ.ನಾಗಲಕ್ಷ್ಮೀ ಚೌಧರಿ
—————-
ಕೊಪ್ಪಳ ಫೆಬ್ರವರಿ 06, : ಸಮಾಜದಲ್ಲಿ ಅನೇಕ ಸವಾಲುಗಳನ್ನು ಎದುರಿಸುತ್ತಿರುವ ಮಾಜಿ ದೇವದಾಸಿಯರಿಗೆ ಸರ್ಕಾರಿ ಸೌಲತ್ತು ಒದಗಿಸುವಲ್ಲಿ ಪ್ರಾಮಾಣಿಕವಾಗಿ ಪ್ರಯತ್ನಿಸುವುದಾಗಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌಧರಿ ಹೇಳಿದರು.
ಶುಕ್ರವಾರದಂದು ಕೊಪ್ಪಳ ತಾಲೂಕ ಪಂಚಾಯತ ಆವರಣದಲ್ಲಿ ಆಯೋಜಿಸಿದ್ದ ಮಾಜಿ ದೇವದಾಸಿಯರೊಂದಿಗೆ ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಾಜಿ ದೇವದಾಸಿಯರ ಬಗ್ಗೆ ಈಗಾಗಲೇ ಸಮೀಕ್ಷೆ ಕೈಗೊಳ್ಳಲಾಗಿದ್ದು, ಸಮೀಕ್ಷೆಯಿಂದ ಯಾರು ಕೂಡಾ ಹೊರಗುಳಿಯದಂತೆ ಕ್ರಮವಹಿಸಲು ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಲಾಗುವುದು. ವಿವಿಧ ವಸತಿ ಯೋಜನೆಯಡಿ ಮಾಜಿ ದೇವದಾಸಿಯರಿಗೆ ಮನೆ ಮಂಜೂರಾತಿಗೆ ಕ್ರಮ ವಹಿಸಲಾಗುವುದು. ಮಾಜಿ ದೇವದಾಸಿಯರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅವುಗಳನ್ನು ಈಗಾಗಲೇ ಅವಹಾಲುಗಳ ಮೂಲಕ ಸ್ವೀಕರಿಸಲಾಗಿದ್ದು, ಆಯೋಗದ ಮೂಲಕ ಸಮಸ್ಯೆ ಬಗೆಹರಿಸುವಲ್ಲಿ ಕ್ರಮವಹಿಸಲಾಗುವುದು ಎಂದರು. ಮಾಜಿ ದೇವದಾಸಿಯರ ಮಕ್ಕಳಿಗೆ ಶಿಕ್ಷಣ, ಉದ್ಯೋಗ, ಸರ್ಕಾರಿ ಮೀಸಲಾತಿ ಸೌಲಭ್ಯ ಕುರಿತು ಸರ್ಕಾರಕ್ಕೆ ಗಮನಕ್ಕೆ ತರುವಲ್ಲಿ ಕಾರ್ಯಪ್ರವೃತ್ತಳಾಗುತ್ತೇನೆ ಎಂದರು.
ಸಂವಾದದ ಮೂಲಕ ಸಮಸ್ಯೆಗಳ ಸ್ವೀಕಾರ:
ಸಂವಾದದಲ್ಲಿ ಹಾಜರಿದ್ದ ಮಾಜಿ ದೇವದಾಸಿಯರು ಸಮಾಜದಲ್ಲಿ ತಾವು ಎದುರಿಸುತ್ತಿರುವ ಸಮಸ್ಯೆಗಳಾದ ವಸತಿ ಮಂಜೂರಾತಿ, ಮಾಶಾಸನ ಹೆಚ್ಚಳ, ಉನ್ನತ ಶಿಕ್ಷಣಕ್ಕೆ ಪ್ರೋತ್ಸಾಹಧನ, ಸರ್ಕಾರಿ ಉದ್ಯೋಗದಲ್ಲಿ ಮೀಸಲಾತಿ ಇತ್ಯಾದಿಗಳ ಕುರಿತು ಅಧ್ಯಕ್ಷರ ಮುಂದೆ ಸಮಸ್ಯೆ ಹೇಳಿಕೊಂಡರು.
ಸರಳತೆ ಮೆರೆದ ಮಹಿಳಾ ಆಯೋಗದ ಅಧ್ಯಕ್ಷರು:
ವೇದಿಕೆ ಮೇಲಿದ್ದ ಮಹಿಳಾ ಆಯೋಗದ ಅಧ್ಯಕ್ಷರು, ಮಾಜಿ ದೇವದಾಸಿಯರ ಬಳಿಯೇ ಬಂದು ಅವರ ಸಮಸ್ಯೆ ಆಲಿಸಿ, ಅವರ ಸಮಸ್ಯೆಗಳಿಗೆ ಸ್ಪಂದಿಸುವುದಾಗಿ ಭರವಸೆ ಮೂಡಿಸಿದರು.
ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಪರಶುರಾಮ ಶೆಟ್ಟೆಪ್ಪನವರ, ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ದುಂಡಪ್ಪ ತುರಾದಿ, ತಹಶೀಲ್ದಾರ ಬಸವರಾಜ ತೆನ್ನಳ್ಳಿ, ನಗರಸಭೆ ಆಯುಕ್ತ ವೆಂಕಟೇಶ ನಾಗನೂರು, ಸ್ನೇಹಾ ಸಂಸ್ಥೆಯ ಭಾರತಿ ಮಠದ, ನಗರ ಪೊಲೀಸ್ ಠಾಣೆಯ ಪೊಲೀಸ್ ಇನ್ಸಪೆಕ್ಟರ್ ಜಯಪ್ರಕಾಶ, ಶಿಶು ಅಭಿವೃದ್ದಿ ಯೋಜನಾಧಿಕಾರಿ ರೋಹಿಣಿ ಕೊಟಗಾರ, ದೇವದಾಸಿ ಪುನರ್ವಸತಿ ನಿಗಮ ಅಧಿಕಾರಿಗಳು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗಳ ಅಧಿಕಾರಿಗಳು ಸೇರಿದಂತೆ ಸುಮಾರು 300ಕ್ಕೂ ಹೆಚ್ಚು ಮಾಜಿ ದೇವದಾಸಿಯರು ಹಾಜರಿದ್ದರು.

Related Articles

Leave a Reply

Your email address will not be published. Required fields are marked *

Back to top button