Uncategorized

ವಾಹನ ಚಾಲಕರು ರಸ್ತೆ ಸುರಕ್ಷತೆಗೆ ಮೊದಲ ಆದ್ಯತೆ ನೀಡಿ- ನ್ಯಾ. ಮಹಾಂತೇಶ ದರಗದ

37ನೇ ರಾಷ್ಟ್ರೀಯ ರಸ್ತೆ ಸುರಕ್ಷಿತಾ ಮಾಸಾಚರಣೆಯ ಸಮಾರೋಪ

—-
ಕೊಪ್ಪಳ ಫೆಬ್ರುವರಿ 03 : ವಾಹನಗಳ ವೇಗದ ಮಿತಿ, ಚಾಲನೆಯ ಇತಿಮಿತಿಗಳನ್ನು ಅರ್ಥ ಮಾಡಿಕೊಂಡು ಎಲ್ಲಾ ವಾಹನ ಚಾಲಕರು ರಸ್ತೆ ಸುರಕ್ಷತೆಗೆ ಮೊದಲ ಆದ್ಯತೆ ನೀಡಬೇಕೆಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಕೊಪ್ಪಳ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಮಹಾಂತೇಶ ಎಸ್. ದರಗದ ಹೇಳಿದರು.
 ಅವರು ಮಂಗಳವಾರ ಕೊಪ್ಪಳ ನಗರದ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಛೇರಿಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಪ್ರಾದೇಶಿಕ ಸಾರಿಗೆ ಕಛೇರಿ, ಸಾರ್ವಜನಿಕ ಶಿಕ್ಷಣ ಇಲಾಖೆ ಕೊಪ್ಪಳ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ 37ನೇ ರಾಷ್ಟ್ರೀಯ ರಸ್ತೆ ಸುರಕ್ಷಿತಾ ಮಾಸಾಚರಣೆ-2026ರ ಸಮಾರೋಪ ಸಮಾರಂಭ ನೆರವೇರಿಸಿ ಮಾತನಾಡಿದರು.
 ಪ್ರತಿಯೊಬ್ಬರು ಸಾರಿಗೆ, ಸಂಚಾರ ನಿಯಮಗಳನ್ನು ಅರಿತುಕೊಂಡು ಅವುಗಳನ್ನು ಅಳವಡಿಸಿಕೊಂಡು, ಕಟ್ಟು ನಿಟ್ಟಾಗಿ ಪಾಲಿಸಿದರೆ ರಸ್ತೆ ಸುರಕ್ಷತೆಯನ್ನು ಪರಿಣಾಮಕಾರಿಗೊಳಿಸಲು ಸಾಧ್ಯವಾಗಿದೆ. ಹಾಗಾಗಿ ವಾಹನ ಸವಾರರು ವೇಗದ ಮಿತಿ ಹಾಗೂ ಚಾಲನೆಯ ಇತಿಮಿತಿಗಳನ್ನು ತಿಳಿದುಕೊಳ್ಳಬೇಕು. ದ್ವಿಚಕ್ರ ವಾಹನ ಚಲಾಯಿಸುವಾಗ ಕಡ್ಡಾಯವಾಗಿ ಹೆಲ್ಮಟ್ ಧರಿಸುವುದು ಮತ್ತು ಕಾರು ಚಲಾಯಿಸುವಾಗ ಕಡ್ಡಾಯವಾಗಿ ಸೀಟ್ ಬೆಲ್ಟ್ ಧರಿಸಬೇಕು. ಇದರ ಜೊತೆಗೆ ವಾಹನ ಚಲಾಯಿಸುವಾಗ ಮೊಬೈಲ್ ಬಳಕೆ ಮಾಡದಿರುವುದು ಹಾಗೂ ಇತರೆ ಸುರಕ್ಷತಾ ಕ್ರಮಗಳ ಪಾಲನೆಯೊಂದಿಗೆ ಅನೇಕ ಅಪಘಾತಗಳನ್ನು ತಪ್ಪಿಸಬಹುದು ಎಂದರು.
 ಕಾನೂನುಗಳು ಇರುವುದು ನಮ್ಮ ಸುರಕ್ಷತೆಗೆ. ನಾವೆಲ್ಲರೂ ಅವುಗಳನ್ನು ಪಾಲನೆ ಮಾಡಬೇಕು. 18 ವರ್ಷದೊಳಗಿನ ಮಕ್ಕಳಿಗೆ ದ್ವಿಚಕ್ರ ಸೇರಿದಂತೆ ಇತರೆ ಯಾವುದೇ ವಾಹನಗಳ ಚಾಲನೆಗೆ ಕೊಡಬಾರದು. ವಾಹನಗಳ ಮಾರಾಟ ಮಾಡಿದ ತಕ್ಷಣ ಅದನ್ನು ವಾಹನ ಖರೀದಿಸಿದವರ ಹೆಸರಿಗೆ ವರ್ಗಾಯಿಸಬೇಕು. ವಾಹನಗಳ ಸುಸ್ಥಿತಿ ಮತ್ತು ಅವುಗಳ ಮಾಲಿನ್ಯ ತಪಾಸಣೆಯಂತಹ ಕ್ರಮಗಳನ್ನು ಅನುಸರಿಸಬೇಕು. ರಸ್ತೆ ನಿಯಮಗಳನ್ನು ಪಾಲನೆ ಮಾಡುವುದರ ಮೂಲಕ ಅಪಘಾತಗಳನ್ನು ತಡೆಗಟ್ಟಬೇಕೆಂದು ಹೇಳಿದರು.
 ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಿಲ್ಲಾ ಅನುಷ್ಠಾನಾಧಿಕಾರಿ ಡಾ. ರವೀಂದ್ರನಾಥ ಎಂ.ಎಚ್ ಅವರು ಮಾತನಾಡಿ, ವಾಹನ ಚಾಲಕರು ಸಂಚಾರ ನಿಯಮಗಳನ್ನು ಪಾಲಿಸುವುದು ಅತ್ಯವಶ್ಯಕವಾಗಿದೆ. ತೆರಳಬೇಕಾದ ಸ್ಥಳಕ್ಕೆ ನಿಗದಿತ ಅವಧಿಯೊಳಗೆ ತಲುಪಬೇಕೆಂಬ ಕಾರಣಕ್ಕೆ ಅತೀ ವೇಗವಾಗಿ ವಾಹನ ಚಾಲನೆ ಮಾಡಬಾರದು. ವಾಹನಗಳನ್ನು ನಿಧಾನವಾಗಿ ಜಾಗರೂಕತೆಯಿಂದ ಚಾಲನೆ ಮಾಡಬೇಕು. ನಿರ್ದಿಷ್ಟ ಸಮಯಕ್ಕೆ ತಲುಪಲು ಸ್ವಲ್ಪ ಮುಂಚಿತವಾಗಿ ಹೊರಡುವ ಮನೋಭಾವ ರೂಢಿಸಿಕೊಳ್ಳಬೇಕು. ರಸ್ತೆ ಸುರಕ್ಷತೆ ಬಗ್ಗೆ ವಾಹನಗಳ ಸುಸ್ಥಿತಿ, ವಾಹನ ಚಾಲನೆವೇಳೆ ಮದ್ಯ ಪಾನದ ಸೇವನೆ ಮಾಡದಿರುವುದು, ಮೊಬೈಲ್ ಬಳಕೆ ಮಾಡದಿರುವುದು ಮತ್ತು ಸರಿಯಾದ ಕ್ರಮದಲ್ಲಿ ವಾಹನಗಳ ಪಾರ್ಕಿಂಗ್ ಸೇರಿದಂತೆ ಇತರೆ ಸಂಚಾರಿ ನಿಯಗಳ ಬಗ್ಗೆ ಹೆಚ್ಚು ಜಾಗೃತಿ ಮೂಡಿಸಬೇಕು ಎಂದರು.
 ಪ್ರಾದೇಶಿಕ ಸಾರಿಗೆ ಅಧಿಕಾರಿ ಪ್ರಭುಸ್ವಾಮಿ ಹಿರೇಮಠ ಅವರು ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿ, ಪ್ರತಿ ವರ್ಷದಂತೆ ಈ ವರ್ಷವು ಸಹ ಕೊಪ್ಪಳ ಜಿಲ್ಲೆಯಾದ್ಯಂತ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆಯನ್ನು ಹಮ್ಮಿಕೊಂಡು ರಸ್ತೆ ನಿಯಮಗಳ ಪಾಲನೆ ಮತ್ತು ಸುರಕ್ಷಿತ ವಾಹನಗಳ ಚಾಲನೆ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲಾಗಿದೆ. ರಸ್ತೆ ಅಫಘಾತಗಳನ್ನು ಸಾಧ್ಯವಾದಷ್ಟು ಕಡಿಮೆ ಮಾಡುವುದು ಹಾಗೂ ಸುರಕ್ಷಿತ ಚಾಲನೆ ಮೂಲಕ ವಾಹನಗಳ ಮತ್ತು ಅವುಗಳ ದಾಖಲೆಗಳನ್ನು ಸುಸ್ಥಿತಿಯಲ್ಲಿಟ್ಟುಕೊಳ್ಳುವಂತೆ ಜನರಿಗೆ ಅರಿವು ಮೂಡಿಸುವುದು ಈ ಮಾಸಾಚರಣೆಯ ಮುಖ್ಯ ಉದ್ದೇಶವಾಗಿದೆ. ರಸ್ತೆ ಸುರಕ್ಷತಾ ನಿಯಮಗಳು ಇರುವುದು ನಮಗಾಗಿ, ಅವುಗಳನ್ನು ನಾವೆಲ್ಲರೂ ಪಾಲನೆ ಮಾಡಬೇಕು ಎಂದು ಹೇಳಿದರು.
 ಕಾರ್ಯಕ್ರಮದಲ್ಲಿ ಉಪವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ ಮಾಲಗಿತ್ತಿ, ಶಾಲಾ ಶಿಕ್ಷಣ ಇಲಾಖೆಯ ಎಪಿಸಿಒ ದುಂಡಪ್ಪಗೌಡ ಪಾಟೀಲ, ಪ್ರಾದೇಶಿಕ ಸಾರಿಗೆ ಇಲಾಖೆಯ ಹಿರಿಯ ಮೋಟಾರ ವಾಹನ ನಿರೀಕ್ಷಕರಾದ ಜಿ.ಎಂ ಸುರೇಶ್, ಪ್ರಭಾಕರ್ ಹಾಗೂ ವಿನಾಯಕ ನಾಯಕ, ಮೋಟಾರು ವಾಹನ ನಿರೀಕ್ಷಕರಾದ ವಿಜೇಂದ್ರ ಡವಳಗಿ, ಪಿ.ಮಂಜುನಾಥನ & ಆರ್.ಪ್ರದೀಪ್ ಕುಮಾರ್ ಸೇರಿದಂತೆ ಸಾರಿಗೆ ಇಲಾಖೆಯ ಇತರೆ ಅಧಿಕಾರಿ ಮತ್ತು ಸಿಬ್ಬಂದಿಗಳು, ಕೊಪ್ಪಳ ಜಿಲ್ಲೆಯ ಲಾರಿ, ಬಸ್, ಮ್ಯಾಕ್ಸಿ, ಕ್ಯಾಬ್, ಟ್ಯಾಕ್ಸಿ, ಆಟೋಗಳ ಚಾಲಕರು & ಮಾಲಕರ ಸಂಘದ ಪ್ರತಿನಿಧಿಗಳು, ವಾಹನ ತರಬೆತಿ ಶಾಲೆಯ ಮುಖ್ಯಸ್ಥರು, ಸಿಬ್ಬಂದಿ ಹಾಗೂ ವಿವಿಧ ವಾಹನಗಳ ಮಾರಾಟ ಸಂಸ್ಥೆಯ ಮತ್ತು ಇತರೆ ಸಂಸ್ಥೆಗಳ ಪ್ರತಿನಿಧಿಗಳು, ಸಾರ್ವಜನಿಕರು ಮತ್ತಿತರರು ಉಪಸ್ಥಿತರಿದ್ದರು. ಸುರೇಶ ಕುಂಬಾರ ಕಾರ್ಯಕ್ರಮ ನಿರೂಪಿಸಿದರು.
*ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್ ವಿತರಣೆ:* ಸಮಾರೋಪ ಸಮಾರಂಭದ ನಂತರ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಛೇರಿ ಆವರಣದಲ್ಲಿ 37ನೇ ರಾಷ್ಟ್ರೀಯ ರಸ್ತೆ ಸುರಕ್ಷಿತಾ ಮಾಸಾಚರಣೆ-2026ರ ಪ್ರಯುಕ್ತ ಸುರಕ್ಷತೆಯ ಭಾಗವಾಗಿ ಜಿಲ್ಲೆಯ ವಿವಿಧ ವಾಹನಗಳ ಮಾರಾಟ ಸಂಸ್ಥೆಗಳಿಂದ ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್‌ಗಳನ್ನು ವಿತರಿಸಲಾಯಿತು.

Related Articles

Leave a Reply

Your email address will not be published. Required fields are marked *

Back to top button