ಶಿವರಾಜ ತಂಗಡಗಿ ವಿರುದ್ಧ ಆರೋಪ ಖಂಡನೆ: ಸಚಿವರ ಮನೆ ಮುಂದೆ ಪ್ರತಿಭಟನೆಗೆ ವಿರೋಧ

ಶಿವರಾಜ ತಂಗಡಗಿ ವಿರುದ್ಧ ಆರೋಪ ಖಂಡನೆ: ಸಚಿವರ ಮನೆ ಮುಂದೆ ಪ್ರತಿಭಟನೆಗೆ ವಿರೋಧ
ಕೊಪ್ಪಳ: ಆರ್ಯ ಈಡಿಗ ಸಮಾಜದ ಗುರು ಪ್ರಣಾವನಂದ ಸ್ವಾಮಿಗಳು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ವಿರುದ್ಧ ನೀಡಿರುವ ಹೇಳಿಕೆಗೆ ಗ್ಯಾರಂಟಿ ಸಮಿತಿ ಜಿಲ್ಲಾಧ್ಯಕ್ಷ ರೆಡ್ಡಿ ಶ್ರೀನಿವಾಸ ಸ್ವಾಮಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಸೋಮವಾರ ನಗರ ಕಾರ್ಯನಿರತ ಪತ್ರಕರ್ತರ ಸಂಘದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಚಿವರ ಮನೆ ಮುಂದೆ ಏಪ್ರಿಲ್ 6ರಂದು ಪ್ರತಿಭಟನೆ ನಡೆಸುವುದಾಗಿ ಸ್ವಾಮಿಗಳು ನೀಡಿರುವ ಹೇಳಿಕೆಯನ್ನು ಖಂಡಿಸಿದರು. ಸಚಿವ ಶಿವರಾಜ ತಂಗಡಗಿ ಅವರು ಈಡಿಗ ಸಮಾಜದ ಅಭಿವೃದ್ಧಿಗಾಗಿ ಸಾಕಷ್ಟು ಸಹಕಾರ ನೀಡಿದ್ದಾರೆ ಎಂದು ಹೇಳಿದರು.
ಪ್ರಣಾವನಂದ ಸ್ವಾಮಿಗಳು ಈಡಿಗ ಸಮಾಜದ ಬೇಡಿಕೆಗಳನ್ನು ಈಡೇರಿಸಲು ಬೀದರಿನಿಂದ ಬೆಂಗಳೂರುವರೆಗೆ ಪಾದಯಾತ್ರೆ ನಡೆಸಿದ್ದು ಶ್ಲಾಘನೀಯ. ಆದರೆ, ಬೆಂಗಳೂರಿನಲ್ಲಿ ನಡೆದ ಪ್ರತಿಭಟನೆಯಲ್ಲಿ ಸಚಿವರು ಭಾಗವಹಿಸಿ ಸ್ವಾಮಿಗಳ ಬೇಡಿಕೆಗಳನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದಾರೆ. ಮುಖ್ಯಮಂತ್ರಿಗಳು ಹಾಗೂ ಸಮಾಜದ ಸಚಿವರು, ಶಾಸಕರೊಂದಿಗೆ ಚರ್ಚಿಸಿ ಅಧಿವೇಶನದ ನಂತರ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.
ಇಂತಹ ಸಂದರ್ಭದಲ್ಲಿ ಸರ್ಕಾರಕ್ಕೆ ಕಾಲಾವಕಾಶ ನೀಡದೇ ಸಚಿವರ ವಿರುದ್ಧ ಆರೋಪ ಮಾಡುವುದು ಸರಿಯಲ್ಲ. ಶಿವರಾಜ ತಂಗಡಗಿ ಅವರು ಕನಕಗಿರಿ ಕ್ಷೇತ್ರದ ಬಸವಣ್ಣಕ್ಯಾಂಪ್ ಮತ್ತು ಹೆಬ್ಬಾಳಕ್ಯಾಂಪ್ ಪ್ರದೇಶಗಳಲ್ಲಿ ಕೋಟ್ಯಾಂತರ ರೂ. ವೆಚ್ಚದಲ್ಲಿ ರಸ್ತೆ ನಿರ್ಮಾಣ ಮಾಡಿಸಿ, ಈಡಿಗ ಸಮಾಜಕ್ಕೆ ಹಲವು ರೀತಿಯಲ್ಲಿ ಸಹಾಯ ಮಾಡಿದ್ದಾರೆ ಎಂದು ಹೇಳಿದರು.
ಸ್ವಾಮಿಗಳು ಸಚಿವರ ವಿರುದ್ಧ ಏಕವಚನದಲ್ಲಿ ಮಾತನಾಡಿರುವುದು ಬೇಸರದ ಸಂಗತಿ. ಸರ್ಕಾರ ಭರವಸೆ ನೀಡಿರುವಾಗಲೇ ಸಚಿವರ ಮನೆ ಮುಂದೆ ಪ್ರತಿಭಟನೆ ನಡೆಸುವುದಾಗಿ ಹೇಳಿರುವುದನ್ನು ಈಡಿಗ ಸಮಾಜದವರು ವಿರೋಧಿಸುತ್ತಿದ್ದಾರೆ. ಆ ಪ್ರತಿಭಟನೆಯಲ್ಲಿ ನಾವು ಭಾಗವಹಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಸ್ವಾಮಿಗಳು ರಾಜಕೀಯ ಶೈಲಿಯಲ್ಲಿ ಮಾತನಾಡದೆ, ಸಮಾಜದ ಅಭಿವೃದ್ಧಿಗಾಗಿ ಸೌಜನ್ಯದಿಂದ ನಡೆದುಕೊಳ್ಳಬೇಕು ಎಂದು ಮನವಿ ಮಾಡಿದರು. ಕಾಂಗ್ರೆಸ್ ಮುಖಂಡ ಹೆಚ್.ಆರ್. ಶ್ರೀನಾಥ ಅವರು ಸಚಿವರ ವಿರುದ್ಧ ಮಾತನಾಡಿರುವ ಕುರಿತು ಮಾಹಿತಿ ಇಲ್ಲ ಎಂದು ಹೇಳಿದರು.ಸುದ್ದಿಗೋಷ್ಠಿಯಲ್ಲಿ ನಾಗರಾಜ ಈಡಿಗೇರ, ಉದಯಕುಮಾರ ಮತ್ತು ಮಂಗಳೇಶ ಈಡಿಗೇರ ಉಪಸ್ಥಿತರಿದ್ದರು.




